ಫ್ಲೌಂಡರ್ - 
ಫ್ಲೂರೊನೆಕ್ಟಿಫಾರ್ಮಿಸ್ ಗಣದ ಸೆಟ್ಟೊಡಾಯ್ಡೈ, ಫ್ಲೂರೊನೆಕ್ಟಾಯ್ಡೈ, ಸೋಲೆಯಾಯ್ಡೈ ಎಂಬ ಮೂರು ಅಧಿಗಣಗಳಿಗೆ ಸೇರಿದ ಹಲವಾರು ಬಗೆಯ ಸಾಗರವಾಸಿ ಮೀನುಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು. ಇವೆಲ್ಲವೂ ಚಪ್ಪಟೆ ಮೀನುಗಳೆಂಬ ಹೆಸರಿನಿಂದಲೂ (ಫ್ಲಾಟ್ ಫಿಶ್) ಪ್ರಸಿದ್ಧವಾಗಿದೆ. ಟರ್ಬಟ್, ಸೋಲ್, ಹ್ಯಾಲಿಬಟ್, ಬ್ರಿಲ್, ಟಾಪನಾಟ್, ಪ್ಲೈಸ್ ಮುಂತಾದವು ಕೆಲವು ಬಗೆಯ ಫ್ಲೌಂಡರ್‍ಗಳು.

ಎಲ್ಲ ಫ್ಲೌಂಡರ್‍ಗಳ ವಯಸ್ಕ ಜೀವಿಗಳೂ ಪಾಶ್ರ್ವೀಯವಾಗಿ ಚಪ್ಪಟೆಯಾಗಿವೆ. ಇವು ಸದಾಕಾಲ ಸಮುದ್ರ ತಳದ ಮಣ್ಣಿನ ಮಧ್ಯೆ ಹುದುಗಿದಂತೆ ಬಿದ್ದಿರುವವು.  ಇವುಗಳ ಎರಡು ಕಣ್ಣುಗಳೂ (ಸಾಧಾರಣವಾಗಿ ತಲೆಯ ಆಚೀಚೆ ಇರಬೇಕಾದವು) ಮೇಲೆ ಕಾಣಿಸುವ ಪಾಶ್ರ್ವದ ಮೇಲೆ ಸ್ಥಿರವಾಗಿರುತ್ತವೆ. ಆಶ್ಚರ್ಯವೆಂದರೆ ಡಿಂಬಾವಸ್ಥೆಯಲ್ಲಿ (ಲಾರ್ವಾ ಹಂತದಲ್ಲಿ) ಬೇರಾವುದೇ ಮೀನಿನ ಮರಿಗಳಂತೆ ದ್ವಿಪಾಶ್ರ್ವ ಸಮಿತಿಯನ್ನು ಹೊಂದಿದ್ದು ಸಹಜವಾಗಿರುವವು. ಆದರೆ ಬೆಳವಣಿಗೆಯಾದಂತೆ ದೇಹದ ಒಳಗೆ ಮತ್ತು ಹೊರಗೆ ಮಾರ್ಪಾಡುಗಳಾಗಿ ದೇಹ ಚಪ್ಪೆಟೆಯಾಗಿ ಕಣ್ಣುಗಳು ಒಂದೇ ಪಾಶ್ರ್ವಕ್ಕೆ ಸೇರುತ್ತವೆ.

ಭಾರತದಲ್ಲಿ ಕಾಣಸಿಗುವ ಕೆಲವು ಚಪ್ಪಟೆ ಮೀನುಗಳೆಂದರೆ, ಸೆಟ್ಟೋಡಸ್ ಎರುಮೈ (ಇಂಡಿಯನ್ ಟರ್ಬಟ್, ಕನ್ನಡದಲ್ಲಿ ದೊಡ್ಡ ನಂಗು), ಸೈನೊಗ್ಲಾಸಸ್ ಸೆಮಿಫೇಸಿಯಾಟಸ್ (ಮಲಬಾರ್ ಸೋಲ್, ನಂಗು ಮೀನು), ಬೋತಸ್ ಪಾಂತರಿನಸ್ (ಚಿರಾಟೆ ನಂಗು), ಸೂಡೊರಾಂಬಸ್, ಸೋಲಿಯಾ ಮುಂತಾದವುಗಳು. 
ಭಾರತದ ಕರಾವಳಿಯಲ್ಲಿ ಇವುಗಳನ್ನು ಗಣನೀಯ ಪ್ರಮಾಣದಲ್ಲಿ ಹಿಡಿದು ಮಾರಾಟ ಮಾಡಲಾಗುತ್ತದೆ. ಬಹುಪಾಲನ್ನು ಸಂಸ್ಕರಿಸಿ ಒಣಗಿಸಿದ ರೂಪದಲ್ಲಿ ಮಾರಾಟ ಮಾಡಲಾಗುವುದು.
					(ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ